ಶಿಕ್ಷಕನ_ಡೈರಿಯಿಂದ
ಒಳ್ಳೆಯತನದ ಸ್ಪರ್ಧೆ
ಮಕ್ಕಳು ಮನೆಯಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡದೆ ಇರುವುದು ತಮ್ಮ ಹೆಗ್ಗಳಿಕೆ ಎಂದು ಭಾವಿಸುವ ತಂದೆ ತಾಯಿಯರು, ಶಾಲೆಯಲ್ಲಿ ಸ್ವಚ್ಛತಾಕಾರ್ಯ ಮಾಡುವುದೂ ದೌರ್ಜನ್ಯ ಎಂದು ಬೊಬ್ಬಿರಿಯುವ ದೊಡ್ಡ ಮನುಷ್ಯರು ಭಾವೀ ಪ್ರಜೆಗಳನ್ನು ತಪ್ಪುಹಾದಿಗೆ ತಳ್ಳುತ್ತಾರೆ ಎಂಬುದು ನನ್ನ ಭಾವನೆ. ಕೆಲವು ಕೆಲಸಗಳು ಕೀಳು ಎಂಬ ಭಾವನೆ ಮಕ್ಕಳಲ್ಲಿ ಮೂಡಿಸುತ್ತಿರುವುದರ ಪರಿಣಾಮವೇ ಹೊಸ ತಲೆಮಾರಿನಲ್ಲಿ ಪ್ರಜ್ಞಾವಂತಿಕೆಯ ಕೊರತೆ ಕಾಣುತ್ತಿರುವುದು, ಸೋಮಾರಿತನ ಹೆಚ್ಚುತ್ತಿರುವುದು ಮತ್ತು ವೃದ್ಧ ತಂದೆತಾಯಿಯರು ವೃದ್ಧಾಶ್ರಮ ಸೇರುತ್ತಿರುವುದು. ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸುವುದು ಶಿಕ್ಷಣದ ಪ್ರಮುಖ ಭಾಗ ಎಂದು ನಾನು ದೃಢವಾಗಿ ನಂಬುತ್ತೇನೆ.
ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ನಾಲ್ಕನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದೆ. ಎಲ್ಲಾ ವಿದ್ಯಾರ್ಥಿಗಳು ಪಾಠದಲ್ಲಿ ಮಗ್ನರಾಗಿದ್ದಾಗ ತರಗತಿಯ ವಿದ್ಯಾರ್ಥಿನಿಯಬ್ಬಳು ಬಳ್ಳನೆ ವಾಂತಿ ಮಾಡಿಬಿಟ್ಟಳು..ಸುತ್ತಮುತ್ತ ಕುಳಿತಿದ್ದ ಮಕ್ಕಳು ವ್ಯಾಕ್ ಎನ್ನುತ್ತಾ ದೂರ ಸರಿದು ಬಿಟ್ಟರು. ವಾಂತಿಯ ಪ್ರಮಾಣವೂ ಸ್ವಲ್ಪ ಹೆಚ್ಚೇ ಇತ್ತು. ಹೆಚ್ಚಿನ ಮಕ್ಕಳು ಮುಖ ಕಿವುಚಿಕೊಂಡಿದ್ದರು.
ವಾಂತಿ ಮಾಡಿದ ಹುಡುಗಿಯನ್ನು ಉಪಚರಿಸಿದ ನಂತರ ತರಗತಿಯನ್ನು ಶುಚಿಗೊಳಿಸುವ ಕಡೆ ನನ್ನ ಗಮನ ಹರಿಯಿತು. " ಕ್ಲಾಸ್ ಕ್ಲೀನ್ ಮಾಡ್ಬೇಕಲ್ಲಾ...." ಎಂದೆ, ಯಾರು ಕ್ಲೀನ್ ಮಾಡ್ತೀರಿ ಎನ್ನುವ ಭಾವದಲ್ಲಿ. ಸಹಜವಾಗಿ ನನ್ನ ದೃಷ್ಟಿ ವಾಂತಿ ಮಾಡಿದ ಹುಡುಗಿಯ ಆಪ್ತಮಿತ್ರೆಯರೆಡೆಗೆ ಹೊರಳಿತ್ತು. ಆದರೆ ಅವರ ಮುಖದಲ್ಲಿ 'ನನ್ನ ಹೆಸರು ಹೇಳದಿದ್ದರೆ ಸಾಕು' ಎಂಬ ಭಾವ ಕಾಣಿಸುತ್ತಿತ್ತು. ಎಲ್ಲರೂ ಮೌನವಾಗಿದ್ದಾಗ ವಾಂತಿ ಮಾಡಿದ ಹುಡುಗಿಯ ಪರಮಾಪ್ತೆಯೇನೂ ಆಗಿರದ ಸೌಜನ್ಯ ಎಂಬ ಹುಡುಗಿ "ನಾನು ಕ್ಲೀನ್ ಮಾಡ್ತೇನೆ ಸರ್" ಎಂದು ಮುಂದೆ ಬಂದಳು. ಅವಳಿಗೆ ಯಾರು ನೆರವಾಗ್ತೀರಿ ಎಂದಾಗ ಅವಳಿಂದ ಉತ್ತೇಜಿತರಾದ ಮೂವರು ಹುಡುಗರು ಮುಂದೆ ಬಂದರು.. ಹುಡುಗರು ನೀರು ತಂದರೆ ನಮ್ಮ ಸೌಜನ್ಯ ತರಗತಿಗೆ ನೀರೆರೆದು ಶುಚಿಗೊಳಿಸಿದಳು. ಐದು ನಿಮಿಷದಲ್ಲಿ ತರಗತಿ ಸ್ವಚ್ಛವಾಯ್ತು.
ಕೆಲಸ ಮುಗಿದ ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಒಂದೆಡೆ ಕುಳ್ಳಿರಿಸಿಕೊಂಡು ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳನ್ನು ನೆನಪಿಸಿದೆ. "ತರಗತಿಯಲ್ಲಿ ಅತ್ಯಂತ ವೇಗವಾಗಿ ಓಡುವವರ್ಯಾರು? ಚೆನ್ನಾಗಿ ಹಾಡುವವರು ಯಾರು? ಸುಂದರ ಅಕ್ಷರ ಯಾರದ್ದು ?......." ಹೀಗೇ ಒಂದೊಂದಾಗಿ ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ಪಟಾಪಟ್ ಉತ್ತರಗಳೂ ಬಂದವು. ಕೊನೆಯದಾಗಿ "ತರಗತಿಯಲ್ಲಿ ಎಲ್ಲರಿಗಿಂತ ಒಳ್ಳೆಯವರು ಯಾರು?" ಕೇಳಿದೆ. ಮಕ್ಕಳಮುಖ ಮುಖ ನೋಡಿಕೊಂಡರು.
"ನಿಮಗೆ ಬೇರೆ ಬೇರೆ ಸ್ಪರ್ಧೆಗಳು ನಡೆಯುವಂತೆ ಈಗ ಐದು ನಿಮಿಷದ ಹಿಂದೆ ಒಂದು ಒಳ್ಳೆಯತನದ ಸ್ಪರ್ಧೆ ನಡೆದಿತ್ತು " ಎಂದೆ. ಕೆಲವರ ಮುಖದಲ್ಲಿ ಮಂದಹಾಸ. "ಅದರ ವಿಜೇತರು......" ಎಂದಾಕ್ಷಣ ಇಡೀ ತರಗತಿ
"ಸೌಜನ್ಯಾ……" ಎಂದು ಒಕ್ಕೊರಲಿನಿಂದ ಕಿರುಚಿತ್ತು.. ಎಲ್ಲಾ ಮಕ್ಕಳು ಸೌಜನ್ಯಳತ್ತ ಮೆಚ್ಚುಗೆಯ ನೋಟ ಬೀರುತ್ತಿದ್ದರೆ ಅವಳ ಕಣ್ಣುಗಳು ಸೂಸುತ್ತಿದ್ದ ಸಂತೃಪ್ತಿಯ ಭಾವ ನನ್ನೊಳಗೂ ಅದೇ ಭಾವವನ್ನು ಮೂಡಿಸಿತ್ತು.
-ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ ಓದಿ ನಿಮ್ಮದಾಗಿಸಿಕೊಳ್ಳಿ.