ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ರಾಷ್ಟ್ರಾದ್ಯಂತ ಶಿಕ್ಷಾ ಸಪ್ತ ಕಾರ್ಯಕ್ರಮವನ್ನು ಕಲಿಕೆ ಮತ್ತು ಅಭಿವೃದ್ಧಿಯ ವಿವಿಧ ಅಂಶಗಳನ್ನು ಕೇಂದ್ರೀಕರಿಸುವ ವಾರದ ಅವಧಿಯ ಕಾರ್ಯಕ್ರಮವನ್ನು 2024 ರ ಜುಲೈ 22 ರಿಂದ 28ರವರೆಗೆ ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಶಿಕ್ಷಕರು, ನೀತಿ ನಿರೂಪಕರು ಮತ್ತು ಪಾಲುದಾರರ ನಡುವೆ ಸಯೋಗ ಮತ್ತು ನಾವಿನ್ಯತೆಯ ಮನೋಭಾವವನ್ನು ಬೆಳೆಸುವ ಗುರಿಯನ್ನು ಶಿಕ್ಷಣ ಸಪ್ತಹ ಹೊಂದಿದೆ. ಇದು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು ಚರ್ಚಿಸಲು ಮತ್ತು ಗುಣಮಟ್ಟದ ದೃಷ್ಟಿಕೋನವನ್ನು ತಳಮಟ್ಟದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂದಿನ ಹಾದಿಯನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ನಿಪುನ್ ಭಾರತ ಹಾಗೂ ಇತರ ಕಾರ್ಯಕ್ರಮಗಳು ಅನುಷ್ಠಾನಗೊಂಡ ಕಳೆದ ನಾಲ್ಕು ವರ್ಷಗಳಲ್ಲಿ ಗಳಿಸಿದ ಸಾಧನೆಗಳ ಉತ್ಸಾಹವನ್ನು ಪ್ರತಿಧನಿಸಲು ಒಂದು ಸಾಮಾನ್ಯ ವೇದಿಕೆಯನ್ನು ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದೆ. ವಾರದ ಪ್ರತಿಯೊಂದು ದಿನವು ಒಂದು ನಿರ್ದಿಷ್ಟ ವಿಷಯಕ್ಕೆ ಮೀಸಲಾಗಿದ್ದು ಶಿಕ್ಷಣ ಮತ್ತು ಅಭಿವೃದ್ಧಿಯ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ.
ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ “ಶಿಕ್ಷಾ ಸಪ್ತ” ಕಾರ್ಯಕ್ರಮ ನಿರ್ವಹಿಸಲು ಅನುಸರಿಸಬೇಕಾದ ಯೋಜಿತ ದಿನಗಳ ವಿವರಗಳನ್ನು ಕೆಳಕಂಡಂತೆ ನೀಡಲಾಗಿದೆ.
ದಿನಾಂಕ : 22/07/2024, ಸೋಮವಾರ
ಕಾರ್ಯಕ್ರಮ : ಟಿಎಲ್ಎಂ ಉಪಕರಣಗಳ ತಯಾರಿ ದಿನ.
ವಿವರ : ಸ್ಥಳೀಯ ಸಂದರ್ಭದ ಆಧಾರದ ಮೇಲೆ ಕಲಿಕೋಪಕರಣಗಳನ್ನು ಪ್ರದರ್ಶಿಸಲು ಮತ್ತು ಬೋಧನಾ ಕಲಿಕೆಯ ಪ್ರಕ್ರಿಯೆಯಲ್ಲಿ ಬಳಸಲು ಶಿಕ್ಷಕರನ್ನು ಪ್ರೋತ್ಸಾಹಿಸುವುದು.
ದಿನಾಂಕ : 23/07/2024 ಮಂಗಳವಾರ
ಕಾರ್ಯಕ್ರಮ : ಎಫ್.ಎಲ್.ಎನ್. ದಿನ ( ನಿಪುಣ್ ಭಾರತ್ ಕರ್ನಾಟಕ ಚಟುವಟಿಕೆಗಳು).
ವಿವರ: ನಿಪುಣ್ ಎಫ್.ಎಲ್.ಎನ್. ಮಿಷನ್ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಪಾಲುದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು.
ದಿನಾಂಕ : 24/07/2024 ಬುಧವಾರ
ಕಾರ್ಯಕ್ರಮ : ಕ್ರೀಡಾ ದಿನ
ವಿವರ : ಕಲಿಯುವವರಲ್ಲಿ ಕ್ರೀಡೆ ಮತ್ತು ಫಿಟ್ನೆಸ್ ನ ಮಹತ್ವವನ್ನು ತಿಳಿಸಲು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದು.
ದಿನಾಂಕ: 25/07/2024 ಗುರುವಾರ
ಕಾರ್ಯಕ್ರಮ : ಸಾಂಸ್ಕೃತಿಕ ದಿನ
ವಿವರ: ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ವೈವಿಧ್ಯತೆಯ ಪ್ರಜ್ಞೆಯನ್ನು ಬೆಳೆಸಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲು, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದು.
ದಿನಾಂಕ: 26/07/2024 ಶುಕ್ರವಾರ
ಕಾರ್ಯಕ್ರಮ: ಕೌಶಲ್ಯ ಮತ್ತು ಡಿಜಿಟಲ್ ಉಪಕ್ರಮಗಳ ದಿನ
ವಿವರ: ಉದ್ಯೋಗ ಕ್ಷೇತ್ರದಲ್ಲಿ ಬದಲಾಗುತ್ತಿರುವ ಸ್ವರೂಪ ಮತ್ತು ಹೊಸ ಕೌಶಲ್ಯಗಳ ಅಗತ್ಯವನ್ನು ಗುರುತಿಸುವುದು. ಒಟ್ಟಾರೆ ತರಗತಿಯ ಅನುಭವವನ್ನು ಹೆಚ್ಚಿಸಲು ಡಿಜಿಟಲ್ ಉಪಕರಣಗಳನ್ನು ಪ್ರತಿಬಿಂಬಿಸುವುದು.
ದಿನಾಂಕ : 27/07/2024 ಶನಿವಾರ
ಕಾರ್ಯಕ್ರಮ: ಇಕೋ ಕ್ಲಬ್ ಮತ್ತು ಶಾಲಾ ಪೌಷ್ಟಿಕಾಂಶ ದಿನ.
ವಿವರ: ಇಕೋ ಕ್ಲಬ್ ಚಟುವಟಿಕೆಗಳನ್ನು ಸ್ಥಾಪಿಸಲು ಕ್ರಿಯಾಯೋಜನೆ ರೂಪಿಸುವುದು. ವಿದ್ಯಾರ್ಥಿಗಳು ಹಾಗೂ ಭೂಮಿ ತಾಯಿ ನಡುವಿನ ಭಾಂಧವ್ಯವನ್ನು ಬಲಪಡಿಸಲು ಉಪಕ್ರಮದ ಅಡಿಯಲ್ಲಿ ಶಾಲೆಗಳಲ್ಲಿ ತೋಟಗಾರಿಕೆ ಅಭಯಾನವನ್ನು ಆಯೋಜಿಸುವುದು.
ದಿನಾಂಕ: 28/07/2024 ಆದಿತ್ಯವಾರ
ಕಾರ್ಯಕ್ರಮ : ಸಮುದಾಯದ ಪಾಲ್ಗೊಳ್ಳುವಿಕೆ ದಿನ
ವಿವರ : ವಿದ್ಯಾರ್ಥಿಗಳ ಸಾಮಾಜಿಕ ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ಕೌಶಲ್ಯ ಅಭಿವೃದ್ಧಿಗೆ ಪರಿಸರ ವ್ಯವಸ್ಥೆ ಒದಗಿಸಲು ಸ್ಥಳೀಯ ಸಮುದಾಯಗಳು, ಎಸ್ ಡಿ ಎಂ ಸಿ, ಪೋಷಕರೊಂದಿಗೆ ಸಹಯೋಗವನ್ನು ಉತ್ತೇಜಿಸುವುದು.
ಪ್ರತಿದಿನದ ಕಾರ್ಯಕ್ರಮದ ವಿವರಗಳನ್ನು ಫೋಟೋ ವಿಡಿಯೋದಲ್ಲಿ ಗೂಗಲ್ ಟ್ರ್ಯಾಕರ್ ನಲ್ಲಿ ಇಂದೀಕರಿಸಿ, ವರದಿಯನ್ನು ದಾಖಲೀಕರಣದೊಂದಿಗೆ ರಾಜ್ಯ ಯೋಜನಾ ಕಚೇರಿಗೆ ಸಲ್ಲಿಸಲು ತಿಳಿಸಿದೆ. ಶಿಕ್ಷಣ ಮಂತ್ರಾಲಯ ನವದೆಹಲಿಯ ಕಾರ್ಯಕ್ರಮವಾಗಿದ್ದು ಇಲಾಖೆಯ ಅಧಿಕಾರಿಗಳು ತಂಡಗಳನ್ನು ರಚಿಸಿ ಶಾಲೆಗಳಿಂದ ಸೂಕ್ತ ಮಾಹಿತಿ ಪಡೆಯುವಂತೆ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.