ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸುರಕ್ಷತಾ
ಕ್ರಮಗಳನ್ನು ಅನುಸರಿಸುವ ಕುರಿತು
ಉಲ್ಲೇಖ-1ರನ್ವಯ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು
ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇನ್ನಿತರೆ
ಯಾವುದೇ ಚಟುವಟಿಕೆಗಳಿಗೆ ಬಳಸಿಕೊಳ್ಳುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿರುತ್ತದೆ.
ಆದಾಗ್ಯೂ, ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತು ಪಡಿಸಿ, ಇತರ ಚಟುವಟಿಕೆಗಳಿಗೆ
ಇಲಾಖೆ ಅನುಮತಿ ಇಲ್ಲದೆ ಬಳಸಿಕೊಳ್ಳುವುದಕ್ಕೆ ಹಾಗೂ ಅನುಮತಿಸುವುದಕ್ಕೆ ಅವಕಾಶ ನೀಡಬಾರದು
ಎಂದು ಸೂಚನೆ ನೀಡುತ್ತಾ, ಶಾಲಾ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇತರ
ಯಾವುದೇ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ಮತ್ತೊಮ್ಮೆ ಈ ಮೂಲಕ ತಿಳಿಸಲಾಗಿದೆ.
ಉಲ್ಲೇಖ-2ರಲ್ಲಿ ಶಾಲಾ ಆವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠ ಪ್ರವಚನಗಳೊಂದಿಗೆ
ಪಠ್ಯೇತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ,
ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿನಿಯೋಗವಾಗಬೇಕು ಎಂಬ ಉದ್ದೇಶದಿಂದ ಶಾಲಾ
ಮೈದಾನ/ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ /ಉದ್ದೇಶಗಳಿಗೆ ಸರ್ಕಾರ /ಇಲಾಖೆ ಅನುಮತಿ
ಇಲ್ಲದೆ ಬಳಸಬಾರದು ಹಾಗೂ ಅನುಮತಿ ನೀಡಬಾರದು ಎಂದು ತಿಳಿಸಲಾಗಿದ್ದು, ಅದರಂತೆ
ಕ್ರಮವಹಿಸಲು ಮತ್ತೊಮ್ಮೆ ಸೂಚಿಸಲಾಗಿದೆ.
ಮುಂದುವರೆದು ಶಾಲೆಗೆ ಸಂಬಂಧವಿರದ ಯಾವುದೇ ವ್ಯಕ್ತಿಗಳು ಶಾಲೆಯ ಆವರಣದಲ್ಲಿ
ಅನಗತ್ಯವಾಗಿ ಸುತ್ತಾಡುತ್ತಿರುವುದು ಕಂಡುಬಂದಲ್ಲಿ ಹಾಗೂ ಯಾವುದೇ ವ್ಯಕ್ತಿಗಳಿಂದ ಶಾಲಾ ಸುರಕ್ಷತೆಗೆ
ಭಂಗ ತರುವಂತಹ ಅನಾಮಧೇಯ ದೂರವಾಣಿ ಕರೆಗಳು, ಪತ್ರಗಳು ಬಂದಲ್ಲಿ ಅಥವಾ ಶೈಕ್ಷಣಿಕ
ಚಟುವಟಿಕೆಗಳಿಗೆ ಅಡ್ಡಿಪಡಿಸಿದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್
ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು. ಒಟ್ಟಾರೆ ಶಾಲಾ
ಮಕ್ಕಳ ಸುರಕ್ಷತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವಂತೆ ಎಲ್ಲಾ ಶಾಲಾ ಮುಖ್ಯಸ್ಥರು, ಉಸ್ತುವಾರಿ
ಅಧಿಕಾರಿ/ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.