ಮಹಿಳಾ ಶಿಕ್ಷಕಿಯರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ:
ಸರ್ಕಾರ ಆದೇಶಬೆಂಗಳೂರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರಿಗೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ವಿಶೇಷ ರಜೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಆದೇಶ ಸಂಖ್ಯೆ: ಇಪಿ 364 ಪಿಬಿಎಸ್ 2025, ದಿನಾಂಕ 24-12-2025ರಂದು ಅಧಿಸೂಚನೆ ಹೊರಡಿಸಿದ್ದಾರೆ. ದೀರ್ಘಕಾಲದಿಂದ ಮಹಿಳಾ ಶಿಕ್ಷಕಿಯರು ಈ ಬೇಡಿಕೆಯನ್ನು ಮುಂದಿಟ್ಟಿದ್ದು, ಇದೀಗ ಸರ್ಕಾರ ಸ್ಪಂದಿಸಿದೆ.
ಈ ರಜೆ ಸೌಲಭ್ಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ಮಹಿಳಾ ಶಿಕ್ಷಕಿಯರಿಗೆ ಅನ್ವಯವಾಗಲಿದೆ. ಪ್ರತಿ ತಿಂಗಳಲ್ಲಿ ಒಂದು ದಿನದಂತೆ ವರ್ಷಕ್ಕೆ 12 ದಿನಗಳ ರಜೆ ನೀಡಲಾಗುತ್ತಿದ್ದು, ಇದು ವೇತನ ಸಹಿತವಾಗಿರುತ್ತದೆ.ಈ ನಿರ್ಧಾರಕ್ಕೆ ಹಿನ್ನೆಲೆಯಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಮಹಿಳಾ ಸರ್ಕಾರಿ ನೌಕರರಿಗೆ ಜಾರಿಯಲ್ಲಿರುವ ನಿಯಮದ ಮಾದರಿಯಲ್ಲಿಯೇ ಶಿಕ್ಷಕಿಯರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಆದೇಶವನ್ನು ತಕ್ಷಣ ಜಾರಿಗೆ ತರಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಧಾರವಾಡ ಮತ್ತು ಕಲಬುರಗಿ ವಿಭಾಗಗಳ ಅಪರ ಆಯುಕ್ತರಿಗೆ ಸರ್ಕಾರ ನಿರ್ದೇಶನ ನೀಡಿದೆ.ನಿಯಮಗಳು ಮತ್ತು ಷರತ್ತುಗಳುಈ ರಜೆಯನ್ನು ಆಯಾ ತಿಂಗಳಲ್ಲೇ ಬಳಸಿಕೊಳ್ಳಬೇಕು. ಮುಂದಿನ ತಿಂಗಳಿಗೆ ವರ್ಗಾಯಿಸಲು ಅವಕಾಶವಿರುವುದಿಲ್ಲ.ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರ ಅಗತ್ಯವಿಲ್ಲ.18 ರಿಂದ 52 ವರ್ಷ ವಯೋಮಿತಿಯ ಮಹಿಳಾ ಶಿಕ್ಷಕಿಯರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ.ಮಹಿಳಾ ಶಿಕ್ಷಕಿಯರ ದೈಹಿಕ ಆರೋಗ್ಯದ ಸಂರಕ್ಷಣೆ ಹಾಗೂ ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ್ದಾಗಿದೆ ಎಂದು ಶಿಕ್ಷಕ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.