ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷ ಪೂರೈಸಿರುವ ಸುಸಂದರ್ಭದಲ್ಲಿ “ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ” ಅಭಿಯಾನದಡಿ ಸರ್ಕಾರಿ ನೌಕರರು ಕೆಂಪು – ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳು ದಾರ (ಟ್ಯಾಗ್ ಹೊಂದಿದ) ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರಕಾರವು ನಿರ್ಣಯಿಸಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ ,ಮಂಡಳಿ ನಿರ್ದೇಶನಾಲಯ,ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಇಲಾಖೆಯ/ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳು ದಾರವನ್ನು ಒದಗಿಸಲು ತಮ್ಮ ಸಂಸ್ಥೆ/ಇಲಾಖೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಾನುಸಾರ ಕ್ರಮವಹಿಸುವಂತೆ ತಿಳಿಸಿದೆ. ನೂತನ ಕೊರಳು ದಾರದ ವಿನ್ಯಾಸವನ್ನು ನೀಡಿರುವ ಆನ್ಲೈನ್ ವಿಳಾಸದಿಂದ ಡೌನ್ಲೋಡ್ ಮಾಡಿಕೊಳ್ಳ ಬಹುದು.