ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 35,000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ.
- ಅತಿಥಿ ಶಿಕ್ಷಕರ ನೇಮಕಾತಿ ಜವಾಬ್ದಾರಿಯನ್ನು ಆಯಾ ಶಾಲಾ ಮುಖ್ಯ ಗುರುಗಳಿಗೆ ನೀಡಿದ್ದು, ಆಯಾ ಹುದ್ದೆಗೆ ನಿಗದಿಪಡಿಸಿದ ಕನಿಷ್ಟ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಮೇಲೆ ನೇಮಕ ಮಾಡಿಕೊಳ್ಳುವಂತೆ ಸೂಚಿಸಿದೆ.
- ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆಯಡಿ ವಿಶೇಷವಾಗಿ ಪ್ರಾರಂಭಿಸಿರುವ ಕರ್ನಾಟಕ ಪಬ್ಲಿಕ್ ಶಾಲೆ/ ಬೆಂಗಳೂರು ಪಬ್ಲಿಕ್ ಶಾಲೆ/ ದ್ವಿಭಾಷ ಮಾಧ್ಯಮ ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇಕಡಾ100 ರಷ್ಟು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವುದು.
- ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗಳಿಗೆ ವರ್ಗಾವಣೆ/ ನೇಮಕಾತಿ ಮೂಲಕ ಖಾಯಂ ಶಿಕ್ಷಕರು ಸ್ಥಳ ನಿಯುಕ್ತಿಗೊಂಡಲ್ಲಿ ಅಂತಹ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ , ತಾಲೂಕಿನಲ್ಲಿ ವರ್ಗಾವಣೆ ಅಥವಾ ಇತರ ಕಾರಣಗಳಿಂದ ತೆರವಾದ ಖಾಲಿ ಹುದ್ದೆಗಳಿಗೆ ಹಂಚಿಕೆ ಮಾಡುವುದು.
- ಪ್ರಸ್ತುತ ತಂತ್ರಾಂಶದಲ್ಲಿರುವಂತೆ ಖಾಲಿ ಹುದ್ದೆಗೆ ಅನುಗುಣವಾಗಿ ಅತಿಥಿ ಶಿಕ್ಷಕರ ಹಂಚಿಕೆ ಮಾಡಲಾಗಿದ್ದು, ನಿಯಮಾನುಸಾರ ಪಾರದರ್ಶಕವಾಗಿ ಅತಿಥಿ ಶಿಕ್ಷಕರ ನೇಮಕ ಮಾಡುವಂತೆ ಮುಖ್ಯ ಶಿಕ್ಷಕರಿಗೆ ಜಿಲ್ಲಾ ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ನೀಡುವುದು.
- ಅತಿಥಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಯಾವುದೇ ಲೋಪ ಉಂಟಾದಲ್ಲಿ ತಾಲೂಕು/ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಶಿಸ್ತುಕ್ರಮಕ್ಕೆ ಒಳಪಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.