ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ (Primary school teachers) ಬೇಡಿಕೆಗಳ ಕುರಿತು ವರಿಶೀಲಿಸಿ ವರದಿ ನೀಡಲು ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎ.ಮಹಾಲಕ್ಷ್ಮಿ ಆದೇಶ ಹೊರಡಿಸಿದ್ದಾರೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸದಿರುವುದು, ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವುದು ಹಾಗೂ ಪದವಿ ಪೂರೈಸಿದ ಶಿಕ್ಷಕರನ್ನು 6 ರಿಂದ 8ಕ್ಕೆ ಸೇವಾ ನಿರತ ಪದವೀಧರ ಶಿಕ್ಷಕರೆಂದು ಒಂದು ಬಾರಿ (One Time) ಪದನಾಮೀಕರಿಸುವುದು ಸೇರಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸಿತ್ತು.
ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ನಿಯಮಾನುಸಾರ ಕೂಲಂಕಷವಾಗಿ ವರಿಶೀಲಿಸಿ, ಅವುಗಳನ್ನು ಪರಿಗಣಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಅವಕಾಶವಿರುವ ಕುರಿತು ಹಾಗೂ ಇದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳು ಮತ್ತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಮಗ್ರವಾದ ವರದಿ ನೀಡಲು ಸಮಿತಿಯನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿವಿಧ ಬೇಡಿಕೆಗಳನ್ನು ಪರಿಗಣಿಸುವ ಕುರಿತು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳನ್ವಯ ಸಮಗ್ರವಾಗಿ ವರಿಶೀಲಿಸಿ ಸೂಕ್ತ ಶಿಫಾರಸು ಹಾಗೂ ಸ್ಪಷ್ಟ ಅಭಿಪ್ರಾಯವನ್ನೊಳಗೊಂಡ ಸಮಗ್ರ ವರದಿಯನ್ನು ನೀಡಲು ಈ ಕೆಳಕಂಡಂತೆ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.
ಸಮಿತಿ ಅಧ್ಯಕ್ಷರು, ಸದಸ್ಯರು
1.ಅಧ್ಯಕ್ಷರು- ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ
- ಸದಸ್ಯರು- ಪ್ರತಿನಿಧಿ, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ
- ಸದಸ್ಯರು- ಪ್ರತಿನಿಧಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು), ಕರ್ನಾಟಕ ಸರ್ಕಾರ ಸಚಿವಾಲಯ
- ಸದಸ್ಯರು-ಪ್ರತಿನಿಧಿ- ಕಾನೂನು ಇಲಾಖೆ, ಕರ್ನಾಟಕ ಸಚಿವಾಲಯ
- ಸದಸ್ಯರು- ನಿರ್ದೇಶಕರು (ಪ್ರಾಥಮಿಕ ಶಿಕ್ಷಣ), ಶಾಲಾ ಶಿಕ್ಷಣ ಇಲಾಖೆ
ಮುಂದುವರಿದು, ಈ ಸಮಿತಿಯು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಂಬಂಧಪಟ್ಟ ಇತರೆ ಪಾಲುದಾರರ (stake holders)ಜತೆ ಸಮಾಲೋಚಿಸಿ, ಎಲ್ಲಾ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಮತ್ತು ಸ್ಪಷ್ಟ ಶಿಫಾರಸ್ಸಿನೊಂದಿಗೆ ವಿಸ್ತ್ರತ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.