15 ಜಿಲ್ಲೆಗಳಲ್ಲಿ ‘ಏಕತರಗತಿ ದ್ವಿಭಾಷಾ ಪಠ್ಯಪುಸ್ತಕ’ ಜಾರಿ – ನಲಿಕಲಿ ರದ್ದು
ರಾಜ್ಯ ಸರ್ಕಾರದ ಆದೇಶದ ಪ್ರಕಾರ, 1ರಿಂದ 5ನೇ ತರಗತಿಗಳಿಗಾಗಿ ‘ಏಕತರಗತಿ ದ್ವಿಭಾಷಾ ಪಠ್ಯಪುಸ್ತಕ’ (Single Grade Bilingual) ಪದ್ಧತಿಯನ್ನು 15 ಜಿಲ್ಲೆಗಳ ಆಯ್ದ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಶಾಲೆಗಳಲ್ಲಿ ನಲಿಕಲಿ ಪದ್ಧತಿಗೆ ಬದಲಾಗಿ ಹೊಸ ಬೋಧನಾ ವಿಧಾನ ಜಾರಿಯಾಗಲಿದೆ.
ಯಾವ ಜಿಲ್ಲೆಗಳಲ್ಲಿ ಜಾರಿ?
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಕಲಬುರಗಿ, ಶಿವಮೊಗ್ಗ, ಹಾಸನ, ತುಮಕೂರು, ದಕ್ಷಿಣ ಕನ್ನಡ, ಕೋಲಾರ, ಧಾರವಾಡ, ಬಾಗಲಕೋಟೆ, ವಿಜಯಪುರ ಹಾಗೂ ಕೊಪ್ಪಳ ಜಿಲ್ಲೆಗಳು ಇದರೊಳಗೆ ಸೇರಿವೆ.
ಈ 15 ಜಿಲ್ಲೆಗಳ ಸುಮಾರು 24,328 ಶಾಲೆಗಳಲ್ಲಿ (PM-SHRI, ECCE, KPS ಸೇರಿದಂತೆ) ಏಕತರಗತಿ ಪದ್ಧತಿ ಜಾರಿಯಾಗಲಿದೆ. ಜೊತೆಗೆ 686 CEPMIZ ಶಾಲೆಗಳಲ್ಲಿಯೂ ಏಕದರ್ಜೆ ತರಗತಿಗಳನ್ನು ಆರಂಭಿಸಲು ಯೋಜಿಸಲಾಗಿದೆ.
ನಲಿಕಲಿ ಎಲ್ಲಿ ಮುಂದುವರೆಯಲಿದೆ?
ಉಳಿದ ಸುಮಾರು 16,762 ಶಾಲೆಗಳಲ್ಲಿ, 1ರಿಂದ 3ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಹಾಗೂ 1 ಮತ್ತು 2ನೇ ತರಗತಿಯ ಉರ್ದು ಶಾಲೆಗಳಲ್ಲಿ ನಲಿಕಲಿ ಪದ್ಧತಿ ಮುಂದುವರಿಯಲಿದೆ. ಇದಲ್ಲದೆ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಇತರೆ ಮಾಧ್ಯಮ ಶಾಲೆಗಳಲ್ಲಿ ‘ಕಲಿ-ನಲಿ’ ಪದ್ಧತಿಯನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ಈ ಬದಲಾವಣೆಯ ಮೂಲಕ ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟದ ಹಾಗೂ ಸಮಗ್ರ ಕಲಿಕೆ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.