ಬೆಂಗಳೂರು, ಜುಲೈ 16: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಧ್ಯಾಹ್ನ ಉಪಹಾರ (MDM) ಯೋಜನೆಗೆ ಅಗತ್ಯವಿರುವ ಸೂರ್ಯಕಾಂತಿ ಎಣ್ಣೆ ಮತ್ತು ತೊಗರಿಬೇಳೆ ಖರೀದಿ ಅಧಿಕಾರವನ್ನು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ಗಳಿಗೆ ವಹಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಹೊಸ ವ್ಯವಸ್ಥೆಯು 2026ರ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಿಂದ ಜಾರಿಗೆ ಬರಲಿದೆ.
ಈವರೆಗೆ ಆಯುಕ್ತರ ಮೂಲಕ NCDEX ಪ್ಲಾಟ್ಫಾರ್ಮ್ ಮೂಲಕ ರಾಜ್ಯ ಮಟ್ಟದಲ್ಲಿ ಖರೀದಿ ನಡೆಯುತ್ತಿತ್ತು. ಆದರೆ, ಸರ್ಕಾರವು 16-10-2023ರ ಹಿಂದಿನ ಆದೇಶವನ್ನು ತಕ್ಷಣದಿಂದಲೇ ಹಿಂಪಡೆದು, ಇನ್ನು ಮುಂದೆ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (CEO) ನೇತೃತ್ವದಲ್ಲಿ ಖರೀದಿ ಪ್ರಕ್ರಿಯೆ ನಡೆಸಲು ಸೂಚಿಸಿದೆ.
ಹೊಸ ಆದೇಶದ ಪ್ರಮುಖ ಅಂಶಗಳು:
- ಸೂರ್ಯಕಾಂತಿ ಎಣ್ಣೆ ಮತ್ತು ತೊಗರಿಬೇಳೆ ಖರೀದಿಯನ್ನು ಜಿಲ್ಲಾ ಪಂಚಾಯತ್ CEOಗಳು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ನಿಯಮಾನುಸಾರ ನಡೆಸಬೇಕು.
- ಖರೀದಿಸುವ ಆಹಾರ ಪದಾರ್ಥಗಳು FSSAI ಗುಣಮಟ್ಟದ ಮಾನದಂಡಗಳಿಗೆ ಕಡ್ಡಾಯವಾಗಿ ಅನುಗುಣವಾಗಿರಬೇಕು.
- ಗುಣಮಟ್ಟ ಪರಿಶೀಲನೆಗಾಗಿ ಥರ್ಡ್ ಪಾರ್ಟಿ ಅಸೈಯರ್ಗಳನ್ನು ನೇಮಕ ಮಾಡಬೇಕು.
- ಜಿಲ್ಲಾ ಮಟ್ಟದ ಜಂಟಿ ತಪಾಸಣಾ ಸಮಿತಿ ಸರಬರಾಜಾಗುವ ಪದಾರ್ಥಗಳನ್ನು ಪರಿಶೀಲಿಸಿ ದೃಢೀಕರಿಸಬೇಕು.
- ಟೆಂಡರ್ ವಿವರಗಳು, ಸರಬರಾಜುದಾರರ ಮಾಹಿತಿ ಹಾಗೂ ಗುಣಮಟ್ಟ ಪರೀಕ್ಷಾ ವರದಿಗಳನ್ನು ಜಿಲ್ಲಾ ಪಂಚಾಯತ್ ವೆಬ್ಸೈಟ್ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು.
CEOಗೆ ನೇರ ಹೊಣೆಗಾರಿಕೆ
ಶಾಲೆಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಸರಬರಾಜಾದರೆ ಅಥವಾ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಖರೀದಿ ನಡೆದರೆ, ಅದಕ್ಕೆ ಸಂಬಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನೇ (CEO) ನೇರ ಹೊಣೆಗಾರರನ್ನಾಗಿ ಸರ್ಕಾರ ಸ್ಪಷ್ಟಪಡಿಸಿದೆ.
ಉದ್ದೇಶ
ಖರೀದಿ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸುವ ಮೂಲಕ ಪಾರದರ್ಶಕತೆ ಹೆಚ್ಚಿಸುವುದು, ಗುಣಮಟ್ಟದ ಆಹಾರ ಪದಾರ್ಥಗಳನ್ನು ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವುದು ಹಾಗೂ ಸ್ಥಳೀಯ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.