ಫೆಬ್ರವರಿ 12ರಂದು ಅಕ್ಷರ ದಾಸೋಹ ನೌಕರರ ಮುಷ್ಕರ: ಬಿಸಿಯೂಟ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಸೂಚನೆ
ಬೆಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆ ಮೇರೆಗೆ ಫೆಬ್ರವರಿ 12, 2026 ರಂದು ಕರ್ನಾಟಕ ರಾಜ್ಯಾದ್ಯಂತ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಒಂದು ದಿನದ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ. CITU ನೇತೃತ್ವದಲ್ಲಿ ನಡೆಯಲಿರುವ ಈ ಮುಷ್ಕರದಲ್ಲಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಬಿಸಿಯೂಟ ನೌಕರರು ಭಾಗವಹಿಸುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಹಾಗೂ ಪೂರಕ ಪೌಷ್ಟಿಕ ಆಹಾರ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡಿದೆ.
PM POSHAN ಶಕ್ತಿ ನಿರ್ಮಾಣ್ ಯೋಜನೆಯ ನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ, ಮುಷ್ಕರದ ದಿನದಂದು ಸ್ಥಳೀಯವಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಊಟ ಮತ್ತು ಹಾಲು ವಿತರಿಸಬೇಕು ಎಂದು ಶಾಲಾ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.
ಮುಷ್ಕರದ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ಎಸ್‌ಡಿಎಂಸಿ ಸದಸ್ಯರು ಹಾಗೂ ಇತರ ಸ್ಥಳೀಯ ಸಂಪನ್ಮೂಲಗಳ ಸಹಕಾರ ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಣಾಧಿಕಾರಿಗಳು ಈ ಪ್ರಕ್ರಿಯೆಯ ಮೇಲ್ವಿಚಾರಣೆ ವಹಿಸಿ ಯಾವುದೇ ಶಾಲೆಯಲ್ಲೂ ಬಿಸಿಯೂಟ ವಿತರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಈ ಮುಷ್ಕರ ನಡೆಯುತ್ತಿದ್ದು, ರಾಜ್ಯಾದ್ಯಂತ ಇದರ ಪರಿಣಾಮ ಕಂಡುಬರುವ ಸಾಧ್ಯತೆ ಇದೆ. ಆದರೂ ಮಕ್ಕಳ ಪೌಷ್ಟಿಕ ಆಹಾರ ವಿತರಣೆಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.