ಶ್ರೀಯುತ ಜಗದೀಶ ಶೆಟ್ಟಿ ಎ
ಮುಖ್ಯ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬ್ಲಮೊಗರು
ಮಂಗಳೂರು ದಕ್ಷಿಣ ವಲಯ ಉಳ್ಳಾಲ ತಾಲೂಕು ದ.ಕ
ಜಗದೀಶ ಶೆಟ್ಟಿ ಇವರು ಸಂಕ್ಷಿಪ್ತ ಪರಿಚಯ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ದಕ್ಷಿಣ ವಲಯ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಸರಕಾರಿ ಹಿರಿಯ ಪ್ರಾಥಮಿಕ
ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಶೆಟ್ಟಿ ಎ ಇವರು ತನ್ನ ಸುದೀರ್ಘ 37 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಸಂಪೂರ್ಣ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸೇವೆಗೈಯುತ್ತಾ ಬಂದಿರುವ ಓರ್ವ ಆದರ್ಶ ಶಿಕ್ಷಕರಾಗಿರುತ್ತಾರೆ.
ಬಂಟ್ವಾಳ ತಾಲೂಕು ಇರಾ ಬಾಳೆಪುಣಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1988 ರಲ್ಲಿ ಸೇವೆಗೆ ಸೇರಿದ ಇವರು ತನ್ನ 5 ವರ್ಷಗಳ ಸೇವೆ ಸಲ್ಲಿಸಿ ವರ್ಗಾವಣೆ ನಂತರ ಅಂಬ್ಲಮೊಗರು ಶಾಲೆಯಲ್ಲಿ ಸಹ ಶಿಕ್ಷಕರಾಗಿ, ತದನಂತರ ಕಳೆದ 13 ವರ್ಷಗಳಲ್ಲಿ ಮುಖ್ಯ ಶಿಕ್ಷಕರಾಗಿದ್ದು , ಸ್ಥಳೀಯ ಶಾಸಕರು,ಜನ ಪ್ರತಿನಿಧಿಗಳು, ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ ಸಹಕಾರದೊಂದಿಗೆ ಪ್ರೌಢ ಶಾಲೆ ಮಂಜೂರುಗೊಳಿಸಿ, ಸ್ಥಳೀಯ ಜಾಗದ ಸ್ವಾಧೀನತೆಯ ಕುಮ್ಕಿ ಹಕ್ಕುದಾರರ ಮನವೊಲಿಸಿ 2.27 ಎಕ್ರೆ ಜಾಗವನ್ನು ಪ್ರೌಢಶಾಲೆಗೆ ದೊರಕಿಸಿ 1.28 ಕೋಟಿ ಅನುದಾನದಲ್ಲಿ ಸುಸಜ್ಜಿತ ಪ್ರೌಢಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿಸುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ.
ಪೋಷಕರ ಆಂಗ್ಲ ಮಾಧ್ಯಮ ವ್ಯಾಮೋಹದಿಂದ ತನ್ನ ಶಾಲೆಯಲ್ಲಿ ಮಕ್ಕಳ ದಾಖಲಾತಿ ಬಹಳಷ್ಟು ಕಡಿಮೆಗೊಂಡಾಗ ತನ್ನ ಹಾಗೂ ಸಹ ಶಿಕ್ಷಕರೆಲ್ಲರ ಆರ್ಥಿಕ ಸಹಕಾರದೊಂದಿಗೆ ಉಚಿತ ಶಾಲಾ ಬಸ್ ವ್ಯವಸ್ಥೆಯನ್ನು ಮಾಡಿ ದಾಖಲಾತಿಯನ್ನು ಹೆಚ್ಚಿಸುವುದರೊಂದಿಗೆ ಸರ್ಕಾರದಿಂದ ಆಂಗ್ಲ ಮಾಧ್ಯಮ ತರಗತಿಯನ್ನು ಮಂಜೂರುಗೊಳಿಸಿಕೊಂಡು ದಾನಿಗಳ ಸಹಕಾರದಿಂದ ಉಚಿತವಾಗಿ ಎಲ್ ಕೆ ಜಿ, ಯು ಕೆ ಜಿ, ತರಗತಿ ಆರಂಭಿಸಿ ಇಲಾಖೆಯ ಶಿಕ್ಷಕರಲ್ಲದೆ, ಖಾಸಗಿಯಾಗಿ ನಾಲ್ಕು ಮಂದಿ ಗೌರವ ಶಿಕ್ಷಕರು ಹಾಗೂ ಒಬ್ಬರು ಶಾಲಾ ಸಹಾಯಕಿಯನ್ನು ನೇಮಕ ಮಾಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಯತ್ನ ಪಟ್ಟಿರುತ್ತಾರೆ.ಸುಸಜ್ಜಿತ ಕಟ್ಟಡ, ಸಾಕಷ್ಟು ಪೀಠೋಪಕರಣಗಳ ಪೂರೈಕೆಯ ಜೊತೆಗೆ ಸ್ಮಾರ್ಟ್ ಟಿವಿ ಕಂಪ್ಯೂಟರ್ ಮೂಲಕ ಬೋಧನೆ ಅಲ್ಲದೆ ಶಾಶ್ವತ ದತ್ತಿ ನಿಧಿ ಸ್ಥಾಪಿಸಿ ಪ್ರತಿ ವರ್ಷ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸ್ಕೌಟ್ ಗೈಡ್ಸ್ ಶಿಬಿರಗಳು, ರಾಷ್ಟ್ರೀಯ ಸೇವಾ ಶಿಬಿರ, ವ್ಯಕ್ತಿತ್ವ ವಿಕಸನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಅಲ್ಲದೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಪಂದ್ಯಾಟಗಳನ್ನು ತನ್ನ ಶಾಲೆಯಲ್ಲಿ ಆಯೋಜಿಸಿ ಗುಣಮಟ್ಟದ ಶಿಕ್ಷಣಕ್ಕೆ ಬಹಳಷ್ಟು ಶ್ರಮಿಸಿದ್ದಾರೆ.
ಶಾಲಾ ಶತಮಾನೋತ್ಸವ ಸಂಭ್ರಮದ ಸವಿ ನೆನಪಿಗಾಗಿ ಶಾಲೆಗೆ ದಾನಿಗಳ ಸಹಕಾರದಿಂದ ಕಂಪ್ಯೂಟರ್ ಕೊಠಡಿ ನಿರ್ಮಾಣ, ಅಡುಗೆ ದಾಸ್ತಾನು ಕೊಠಡಿ ಹಾಗೂ ಶೌಚಾಲಯಗಳ ನವೀಕರಣ, ಕಟ್ಟಡದ ಸುರಕ್ಷಿತೆಗೆ ಮೇಲ್ಛಾವಣಿಗೆ ಶೀಟ್ ಅಳವಡಿಕೆ, ನಾವೀನ್ಯಯುತ ಪೀಠೋಪಕರಣಗಳು, ಸಿ ಸಿ ಟಿವಿ ಮುಂತಾದ ಭೌತಿಕ ಸೌಲಭ್ಯಗಳನ್ನು ಪೂರೈಸಿದ್ದಲ್ಲದೆ ವಿಶೇಷವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಉಪಯೋಗಕ್ಕೆ 10 ಲಕ್ಷ ರೂಪಾಯಿ ಮೊತ್ತದ “ಬೊಲೆರೋ ಕಾರು”ಕೊಡುಗೆಯಾಗಿ ನೀಡಿರುವುದು ಸರ್ಕಾರಿ ಶಾಲೆಯೊಂದು ಇಲಾಖೆಗೆ ಕೊಡುಗೆ ನೀಡಿರುವುದು ರಾಜ್ಯದಲ್ಲಿಯೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಾನಿಗಳ ಹಾಗೂ ಸರ್ಕಾರದ ಅನುದಾನದಲ್ಲಿ ಒಂದು ಕೋಟಿ ರೂಪಾಯಿ ಯೋಜನಾ ವೆಚ್ಚದ ನಾಲ್ಕು ತರಗತಿ ಕೊಠಡಿ ಮತ್ತು ಸಭಾಭವನವನ್ನು ಒಳಗೊಂಡ ಶಾಲಾ ಶತಮಾನೋತ್ಸವ ಸ್ಮಾರಕ ಭವನ ನಿರ್ಮಾಣದ ಶಿಲಾನ್ಯಾಸವನ್ನು ವಿಧಾನ ಸಭಾಧ್ಯಕ್ಷರು ಶ್ರೀ ಯು ಟಿ ಖಾದರ್ ಅವರ ಘನ ಅಧ್ಯಕ್ಷತೆಯಲ್ಲಿ ಮಾನ್ಯ ಶಿಕ್ಷಣ ಸಚಿವರು ಶ್ರೀ ಎಸ್ ಮಧು ಬಂಗಾರಪ್ಪ ರವರು ನೆರವೇರಿಸಿದ್ದು ಕಾಮಗಾರಿ ಪ್ರಗತಿ ಹಂತದಲ್ಲಿದೆ ಮತ್ತು ಶಾಲಾ ಸ್ಥಳ ದಾನಿಯೋರ್ವರ ಹೆಸರಿನಲ್ಲಿ ಅವರ ಮಕ್ಕಳು ಬಯಲು ರಂಗ ಮಂದಿರವನ್ನು ನಿರ್ಮಿಸಿ ಕೊಡಲಿದ್ದಾರೆ.
ಜಗದೀಶ ಶೆಟ್ಟಿ ಅವರು ಸ್ಕೌಟ್ ಶಿಕ್ಷಕರಾಗಿದ್ದು ಸತತ 35 ವರ್ಷಗಳಿಂದ ಮಕ್ಕಳಿಗೆ ಸ್ಕೌಟ್ ತರಬೇತಿ ನೀಡುವುದರ ಜೊತೆಗೆ ಸ್ಕೌಟ್ ಗೈಡ್ ರಾಷ್ಟ್ರ ಸಂಸ್ಥೆಯಿಂದ ಅಸಿಸ್ಟೆಂಟ್ ಲೀಡರ್ ಟ್ರೈನರ್ ತರಬೇತಿ ಪಡೆದು ಬಹಳಷ್ಟು ಶಿಕ್ಷಕರಿಗೆ ತರಬೇತಿ ನೀಡಿರುವುದಲ್ಲದೆ ದೆಹಲಿ ಒರಿಸ್ಸಾ ಕೇರಳ ಮಧ್ಯಪ್ರದೇಶ ನೇಪಾಳ ವಾರಣಾಸಿ ಅಂಡಮಾನ್ ಮುಂತಾದ ಕಡೆ ತರಬೇತುದಾರರ ಸಮಾವೇಶದಲ್ಲಿ ಪಾಲ್ಗೊಂಡು ಅಪಾರ ಅನುಭವಗಳಿಸಿದ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ದುಡಿದು ರಾಜ್ಯವಟ್ಟದ ಸಮುದಾಯ ಅಭಿವೃದ್ಧಿ ಶಿಬಿರ ರಾಜ್ಯಮಟ್ಟದ ಕಬ್ ಬುಲ್ ಬುಲ್ ಉತ್ಸವ ಎರಡು ಬಾರಿ ಜಿಲ್ಲಾಮಟ್ಟದ ಸ್ಕೌಟ್ ಗೈಡ್ ಮೇಳ ಅಲ್ಲದೆ ತಾಲೂಕು ಮಟ್ಟದ ಅನೇಕ ಸ್ಕೌಟ್ ಗೈಡ್ ಮೇಳ ಹಾಗೂ ಉತ್ಸವಗಳನ್ನು ತನ್ನ ನೇತೃತ್ವದಲ್ಲಿ ನಡೆಸಿದ ಉತ್ತಮ ಸಂಘಟಕರಾಗಿರುತ್ತಾರೆ
ಶಿಕ್ಷಕ ತರಬೇತಿ ಅಲ್ಲದೆ ಬಿಎ ಪದವಿ ಕನ್ನಡ ರತ್ನ ,ಹಿಂದಿ ರತ್ನ ,ಡ್ರಾಯಿಂಗ್ ಮತ್ತು ಗಮಕ ಪರೀಕ್ಷೆಗಳನ್ನು ಪೂರೈಸಿದ ಇವರು ಗಣಿತ ಮತ್ತು ವಿಜ್ಞಾನ ಬೊಧನೆಯಲ್ಲಿ ಉತ್ತಮ ಶಿಕ್ಷಕರೆನಿಸಿಕೊಂಡಿದ್ದಾರೆ.
ಮಕ್ಕಳ ಶೈಕ್ಷಣಿಕ ಉನ್ನತಿಗೆ ಶ್ರಮಿಸುವುದರ ಜೊತೆಗೆ ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ವಿಭಾಗಿಯ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ,ಕಳೆದ 14 ವರ್ಷಗಳಿಂದ ತಾಲೂಕು ಅಧ್ಯಕ್ಷರಾಗಿದ್ದುಕೊಂಡು ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ನ್ಯಾಯಯುತ ಬೇಡಿಕೆಗಳನ್ನು ಪೂರೈಸುವಲ್ಲಿ ಶ್ರಮಿಸುವ ಒಬ್ಬ ನಿಷ್ಠಾವಂತ ನಾಯಕರೆನಿಸಿಕೊಂಡಿದ್ದಾರೆ.
ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಇವರು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಿ, ತಾಲೂಕು ಸಾಕ್ಷರತಾ ಮುಂದುವರಿಕಾ ಕಲಿಕಾ ಕೇಂದ್ರದ ಕಾರ್ಯದರ್ಶಿಯಾಗಿ ರಾಜೀವ್ ಗಾಂಧಿ ಯುವಶಕ್ತಿ ಸಂಘದ ನೋಡಲ್ ಅಧಿಕಾರಿಯಾಗಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿಯಾಗಿ ಸೇವೆಗಯುತ್ತಿರುವ ಇವರು ಮೀಂಜ ಬಂಟರ ಸಂಘದ ಅಧ್ಯಕ್ಷರಾಗಿದ್ದು ತನ್ನ ಅವಧಿಯಲ್ಲಿ ದಾನಿಗಳ ಸಹಕಾರದಿಂದ ಸಂಘಕ್ಕೆ ಸ್ವಂತ ನಿವೇಶನ ಖರೀದಿಸಿ ಮಿನಿ ಸಭಾಭವನ ಹಾಗೂ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಿದ್ದು ಅಲ್ಲದೆ ಸಮುದಾಯದ ಉಪಯೋಗಕ್ಕೆ ಒಂದು ಎಕರೆ ಜಾಗವನ್ನು ಮಹಾದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಂದ ದಾನವಾಗಿ ಪಡೆಯುವ ಮೂಲಕ ಸಂಘದ ಹಿರಿಮೆಗೆ ಪಾತರಾಗಿದ್ದಾರೆ
ಮಂಜೇಶ್ವರ ತಾಲೂಕು ಕುಳೂರು ಎಲಿಯಾಣದ ಕೃಷಿ ಕುಟುಂಬದ ಶೇಖಪ್ಪ ಶೆಟ್ಟಿ ಮತ್ತು ಕಮಲ ದಂಪತಿಗಳ ಐವರು ಮಕ್ಕಳಲ್ಲಿ ಓರ್ವರಾದ ಇವರು ಭತ್ತ ಅಡಿಕೆ ತೆಂಗು ಬಾಳೆ ರಬ್ಬರ್ ಬಟರ್ ಫ್ರೂಟ್ ಮ್ಯಾಂಗಸ್ಟಿನ್ ಹೀಗೆ ವಿವಿಧ ಬೆಳೆಗಳ ಕೃಷಿಯಲ್ಲೂ ತನ್ನನ್ನು ತೊಡಗಿಸಿಕೊಂಡು ಪ್ರಗತಿಪರ ಕೃಷಿಕರೆನಿಸಿದ್ದಾರೆ. ಇವರ ಬಿಡುವಿಲ್ಲದ ಸೇವೆಗೆ ಸದಾ ಬೆಂಬಲ ನೀಡುತ್ತಿರುವ ಪತ್ನಿ ತಲಪಾಡಿ ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದು ಮಕ್ಕಳಿಬ್ಬರು ಸಿವಿಲ್ ಇಂಜಿನಿಯರಿಂಗ್ ಪದವಿಪೂರೈಸಿ ಸ್ವಂತ ಉದ್ಯೋಗದಲ್ಲಿದ್ದು ಮಗಳನ್ನು ಪ್ರತಿಷ್ಠಿತ ಬಂಟ ಮನೆತನದ ಹುಡುಗನೊಂದಿಗೆ ಮದುವೆ ಮಾಡಿದ್ದಾರೆ.
ಇವರ ಶೈಕ್ಷಣಿಕ ಸಂಘಟನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ
-ಉತ್ತಮ ಶಿಸ್ತು ಶಾಲಾ ಪ್ರಶಸ್ತಿ.
ಉತ್ತಮ ನೈರ್ಮಲ್ಯ ಶಾಲಾ ಪ್ರಶಸ್ತಿ .
ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ .
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ .
ಕೇರಳ ರಾಜ್ಯ ತುಳು ಅಕಾಡೆಮಿ ಪ್ರಶಸ್ತಿ .
ಸ್ಕೌಟಿಂಗ್ ದೀರ್ಘ ಸೇವಾ ಪ್ರಶಸ್ತಿ
ಶಿಕ್ಷಣ ಸೇವಾ ಪ್ರಶಸ್ತಿ .
ಉತ್ತಮ ಜೇಸಿ ಶಿಕ್ಷಕ ಪ್ರಶಸ್ತಿ .
ರೋಟರಿ ಕ್ಲಬ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ .
ಕರಾವಳಿ ಸಾಂಸ್ಕೃತಿಕ ಪರಿಷತ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.
ಶಾಲಾ ಶತಮಾನೋತ್ಸವ ಗೌರವ ಸನ್ಮಾನ.
ಅಲ್ಲದೆ ಹಲವು ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿರುತ್ತಾರೆ.